Monday, April 16, 2007

ನೀನು ತಡವಾಗಿ ಒಪ್ಪಿಕೋ... ಪರವಾಗಿಲ್ಲ!

ನೀನು ತಡವಾಗಿ ಒಪ್ಪಿಕೋ... ಪರವಾಗಿಲ್ಲ!

ನೀನೇ ಮುಂದಾಗಿ "ಐ ಲವ್ ಯೂ’ ಎಂದು ಹೇಳುವವರೆಗೂ ನಾನು ನಿನ್ನ ಕೈ ಮುಟ್ಟಲಾರೆ. ನಿನ್ನೆದುರು ನಿಂತು ಪೆದ್ದುನೀನು ತಡವಾಗಿ ಒಪ್ಪಿಕೋ... ಪರವಾಗಿಲ್ಲ! ಪೆದ್ದಾಗಿ ನಗಲಾರೆ. ನಿನ್ನ ಒಪ್ಪಿಗೆ ತಡವಾಗಿಯೇ ಸಿಕ್ಕರೂ ಅಂಥ ತೊಂದರೆ, ನಷ್ಟ ಯಾವುದೂ ನನಗಿಲ್ಲ.

ಡಿಯರ್ ಜೋ...

ಹೇಗಿದ್ದೀಯ? ಏನ್ ಮಾಡ್ತಾ ಇದೀಯ? ಪರೀಕ್ಷೆಗೆ ವಿಪರೀತ ಓದ್ತಾ ಇದೀಯ ಅಂತ ಕಾಣ್ತಿದೆ. ಈಗಾಗ್ಲೇ ಮೂರು ಪೇಪರ್ ಮುಗಿದು ಹೋದ್ರೂ, ನೀನು ಒಂದೇ ಒಂದು ಸಂಜೆಯಾದ್ರೂ ನಂಗೆ ಸಿಗಲೇ ಇಲ್ವಲ್ಲ ಜೋ...? ಇದು ಸರಿಯೇನೆ ಚಿನ್ನಾ?
ನಂಗೆ ಸುಳ್ಳು ಹೇಳಿ ಗೊತ್ತಿಲ್ಲ. ನಿನ್ನ ಜತೆ ಸುಳ್ಳು ಹೇಳಿ ಸಾಧಿಸಬೇಕಿರೋದು ಕೂಡ ಏನೂ ಇಲ್ಲ. ಹೇಳ್ತೀನಿ ಕೇಳು. ಕಳೆದ ಆರು ತಿಂಗಳಿಂದ ಒಳಗೊಳಗೇ ನಿನ್ನನ್ನು ಪ್ರೀತಿಸ್ತಾ ಇದೀನಿ ನಿಜ. ಆದರೆ, ಈಗ ನಾಲ್ಕು ದಿನದಿಂದ ನಾನು ನಿನ್ನ ಹಿಂದೆ ಬಿದ್ದಿದೀನಿ. ದಿನಾ ರಾತ್ರಿ ೧೦ ಗಂಟೆಯಿಂದ ಹನ್ನೆರಡೂವರೆಗೆ ನಿನ್ನ ರೂಂನ ಲೈಟ್ ಆರಿ ಹೋಗುತ್ತೆ ನೋಡು, ಅಷ್ಟು ಹೊತ್ತಿನ ತನಕ ನಿಮ್ಮ ಮನೆ ಎದುರಿನ ಪಾರ್ಕಿನಲ್ಲೇ ಕೂತಿರ್‍ತೀನಿ. ನೀನು ಲೈಟ್ ಆರಿಸಿದ ತಕ್ಷಣ ನನ್ನಷ್ಟಕ್ಕೆ ನಾನೇ "ಜೋ... ಗುಡ್‌ನೈಟ್, ಸ್ವೀಟ್ ಡ್ರೀಮ್ಸ್’ ಎಂದು ಹೇಳಿ ಹೋಗಿಬಿಡ್ತೀನಿ. ಆಮೇಲೆ ಇಡೀ ರಾತ್ರೀನ ನಿನ್ನದೇ ಧ್ಯಾನದಲ್ಲಿ ಕಳೆದು ಬೆಳ್ಳಂಬೆಳಗ್ಗೇ ನಿನಗಿಂತ ಮುಂಚೆ ರೆಡಿಯಾಗಿ ಸೀದಾ ಎನ್‌ಎಂಕೆಆರ್‌ವಿ ಕಾಲೇಜಿನ ಹತ್ತಿರ ಒಂದೇ ಬಿಡ್ತೀನಿ...
ಏನ್ ಮಾಡ್ಲಿ ಹೇಳು ಜೋ... ಅದು ಹೇಳಿ ಕೇಳಿ ಲೇಡೀಸ್ ಕಾಲೇಜು. ಇಲ್ಲದಿದ್ರೆ ಬಿಡ್ತಿದ್ದೆ ಅಂದುಕೊಂಡೆಯಾ? ಹೇಗಾದ್ರೂ ಮಾಡಿ ಪರೀಕ್ಷೆ ನಡೀತಾ ಇರುವಾಗಲೇ ಒಳಗೆ ಬರುತ್ತಿದ್ದೆ. ಹಾಗೆ ಬಂದವನು ನಿನಗೆ ಬೆಸ್ಟ್ ಆಫ್ ಲಕ್ ಹೇಳಿ ಬಂದು ಬಿಡುತ್ತಿದ್ದೆ...
ನೀನೇ ನೋಡ್ತಾ ಇದೀಯಲ್ಲ ಜೋ, ನಂಗೆ ನಿನ್ನನ್ನ ಮುಟ್ಟುವ, ಲೈನ್ ಹೊಡೆಯುವ, ಗುಲಾಬಿ ಕೊಡುವ, ನಿನ್ನ ಹಿಂದೆಯೇ ನಿಂತುಕೊಂಡು ಹಾಡು ಹೇಳುವ... ಉಹುಂ, ಇಂಥ ಯಾವ ಹುಚ್ಚೂ ನನಗಿಲ್ಲ. ನನ್ನದು ಪ್ರಾಮಾಣಿಕ ಪ್ರೀತಿ, ಶುದ್ಧ ಪ್ರೀತಿ. ಅಮರ ಪ್ರೀತಿ. ಮಧುರ ಪ್ರೀತಿ. ನೀನೇ ಮುಂದಾಗಿ "ಐ ಲವ್ ಯೂ’ ಎಂದು ಹೇಳುವವರೆಗೂ ನಾನು ನಿನ್ನ ಕೈ ಮುಟ್ಟಲಾರೆ. ನಿನ್ನೆದುರು ನಿಂತು ಪೆದ್ದು ಪೆದ್ದಾಗಿ ನಗಲಾರೆ. ನಿನ್ನ ಒಪ್ಪಿಗೆ ತಡವಾಗಿಯೇ ಸಿಕ್ಕರೂ ಅಂಥ ತೊಂದರೆ, ನಷ್ಟ ಯಾವುದೂ ನನಗಿಲ್ಲ. ಈಗಿನ್ನೂ ನಂಗೆ ೨೮ ವರ್ಷ ಕಣೇ ಜೋ... ಹಾಗಾಗಿ ನಾನು ಕಾಯಬಲ್ಲೆ...
ಈ ಪಿಯುಸಿ ಪರೀಕ್ಷೆಗೆ ಅಂತ ನೀನು ತಯಾರಾಗ್ತಾ ಇದೀಯ ನೋಡು, ಅದನ್ನು ನೋಡಿದಾಗೆಲ್ಲ ಹೆದರಿಕೆಯಾಗುತ್ತೆ. ಈ ಹುಡುಗಿ ಇಷ್ಟೊಂದು ಓದ್ತಾಳಲ್ಲ, ಓದಿ ಓದಿ ಎಲ್ಲವೂ ಕನ್‌ಫ್ಯೂಸ್ ಆಗಿಬಿಟ್ರೆ ಅನ್ನಿಸಿ ದಿಗಿಲಾಗುತ್ತೆ. ರಾತ್ರಿ ಪೂರ್ತಿ ನಿದ್ದೆಗೆಟ್ಟಿರ್‍ತೀಯಲ್ಲ, ಆ ಕಾರಣಕ್ಕೆ ಪರೀಕ್ಷೆ ಬರೀತಿರೋವಾಗಲೇ ತಲೆ ಸುತ್ತು ಬಂದು ಬಿದ್ದು ಬಿಟ್ರೆ ಗತಿಯೇನು ಅನ್ನಿಸಿ ಗಾಬರಿಯಾಗುತ್ತೆ. ಆದ್ರೆ ನೀನು, ಬೆಳ್ಳಂಬೆಳಗ್ಗೆ ಕಲರ್‌ಕಲರ್‌ಕಲರ್ರಾಗಿ ಡ್ರೆಸ್ ಮಾಡ್ಕೊಂಡು, ಘಂಘಮಾ ಸೆಂಟು ಹಾಕ್ಕೊಂಡು ಕಾಲೇಜಿಗೆ ಬರ್‍ತೀಯಲ್ಲ, ಆಗ... ಅರರೆ, ರಾತ್ರಿ ನಿದ್ರೆ ಗಟ್ಟಿದ್ರೂ ಬೆಳಗಿನ ಹೊತ್ತಿಗೆ ಹೀಗೆ ಫ್ರೆಶ್ಶಾಗಿ ಬರಲು ಸಾಧ್ಯವಾ ಅನ್ನಿಸಿ ಎಷ್ಟೆಲ್ಲ ಖುಷಿಯಾಗ್ತದೆ ಅಂತೀಯಾ?
ಇನ್ನೂ ಒಂದು ಮಾತು ಹೇಳಲಾ ಜೋ...? ಸ್ವಲ್ಪ ತೆಳ್ಳಗೆ, ಸ್ವಲ್ಪ ಬೆಳ್ಳಗಿದೀಯ ಸರಿ. ಸ್ವಲ್ಪ ಸೋನಾಲಿ ಬೇಂದ್ರೆ ಥರಾ ಕಾಣ್ತೀಯ ನಿಜ. ಆದ್ರೆ ನಿಂಗೆ ಮೂಗೇ ಇಲ್ವಲ್ಲ ಮಾರಾಯ್ತಿ? ಹಾಗಿದ್ರೂ ನಾನು ಪ್ರೀತಿಸ್ತಾ ಇದೀನಿ. ಜಗತ್ತಿನಲ್ಲಿ ನಿನ್ನಂಥ ಹುಡುಗಿ ಇನ್ಯಾರೂ ಇಲ್ಲ ಅಂತ ಹತ್ತು ಜನರ ಮುಂದೆ ವಾದಿಸ್ತಾ ಇದೀನಿ. ಯಾಕೆ ಅಂದ್ರೆ... ಹೌದು ಕಣೇ, ನಾನು ನಿನ್ನನ್ನ ಪ್ರೀತಿಸ್ತಾ ಇದೀನಲ್ಲ, ಆ ಕಾರಣಕ್ಕೆ!
ಜೋ... ಒಂದೇ ಒಂದ್ಸಲ ನೀನು "ಕರಿಯಾ ಐ ಲವ್ ಯೂ’ ಅಂತ ಹಾಡಿದ್ರೆ ಸಾಕು, ನಾನು ಆ ಕ್ಷಣವೇ ಬೆಳ್ಳಿ ಐ ಲವ್ ಯೂ ಎಂದು ಕೋರಸ್ ಹಾಡ್ತೀನಿ. ಮರು ಕ್ಷಣದಿಂದಲೇ ಒಳ್ಳೇ ಹುಡುಗ ಆಗಿಬಿಡ್ತೀನಿ. ದಿನಾಲೂ ನಿಂಗೆ ಬೈಕ್‌ನಲ್ಲಿ ಡ್ರಾಪ್ ಕೊಡ್ತೀನಿ. ಸಂಜೆ ಹೊತ್ತು ವಾಕಿಂಗ್ ಬರ್‍ತೀನಿ. ಕಾಫಿ ಡೇಲಿ ಐಸ್‌ಕ್ರೀಂ ಕೊಡಿಸ್ತೀನಿ. ನೀನು ರೇಗಿದಾಗೆಲ್ಲ ಸೈಲೆಂಟ್ ಆಗಿರ್‍ತೀನಿ. ನೀನು ಫ್ರೆಂಡ್ಲಿ ಆಗಿರ್‍ತೀಯಲ್ಲ, ಆಗ ಇದ್ದಕ್ಕಿದ್ದಂತೆ ನಿನ್ನ ಕಿರುಬೆರಳು ಚಿವುಟಿ ಮಳ್ಳಿ ಥರಾ ನಡ್ಕೊಂಡು ಬರ್‍ತೀನಿ... ಇವತ್ತಿಗೆ ಇಷ್ಟು ಸಾಕು. ನಾಳೆ ಚೆನ್ನಾಗಿ ಪರೀಕ್ಷೆ ಬರಿ.
-ಯಮಾಹಾ ಆರ್‌ಎಕ್ಸ್ ಹುಡುಗ

2 comments:

ರವಿರಾಜ್ ಆರ್.ಗಲಗಲಿ said...

nimma lekhanaglu adbhuta....nimma bdukin preeti hagu reetige nanna salaam

ಗೌತಮ್ ಹೆಗಡೆ said...

omme nanna blog noadi sir. www.ammaaaaa.blogspot.com