Thursday, April 26, 2007

ಬಡವರು ಹೃದಯ ಶ್ರೀಮಂತರು

ಅವನು ಲಕ್ಷಾಧಿಪತಿ. ಅವನಿಗೆ, ಮಕ್ಕಳನ್ನು ತುಂಬ ಮುದ್ದಿನಿಂದ, ತುಂಬಾ ಮಮತೆಯಿಂದ ಸಾಕಿದ್ದೇನೆ ಎಂಬ ಹಮ್ಮು. ಈ ಮಾತನ್ನೂ ಆತ ಮತ್ತೆ ಮತ್ತೆ ಮಕ್ಕಳ ಮುಂದೆ ಹೇಳುತ್ತಲೇ ಇದ್ದ. ಈತ ಎಷ್ಟೇ ಹೇಳಿದರೂ ಒಬ್ಬ ಮಗ ಮಾತ್ರ ಆ ಮಾತಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಉಳಿದುಬಿಟ್ಟಿದ್ದ. ಅವನಿಗೆ ಹೇಗಾದರೂ ತನ್ನ ಪ್ರೀತಿ ಮತ್ತು ಶ್ರೀಮಂತಿಕೆ ಎರಡರ ಪರಿಚಯವನ್ನೂ ಮಾಡಿಕೊಡಬೇಕು ಎಂದು ಲಕ್ಷಾಧಿಪತಿ ತಂದೆಗೆ ಅನಿಸಿತು. ಈ ಸಂಬಂಧವೇ ಒಂದೆರಡು ದಿನ ಯೋಚಿಸಿದವನು, ಕಡು ಬಡವರು ಜೀವಿಸುತ್ತಿರುವ ಪ್ರದೇಶಕ್ಕೆ ಮಗನೊಂದಿಗೆ ಭೇಟಿ ಕೊಡಬೇಕು. ಅಲ್ಲಿ ಒಂದೆರಡು ದಿನ ತಂಗಿದ್ದು, ನಂತರ ವಾಪಸಾಗೋಣ. ಈ ಸಂದರ್ಭದಲ್ಲಿ ಬಡವರ ಮಕ್ಕಳ ಬವಣೆಯನ್ನು ಅರಿತು ಮಗ ತನ್ನೆಡೆಗೆ ಆರಾಧನಾ ಭಾವ ಬೆಳೆಸಿಕೊಳ್ಳುತ್ತಾನೆ ಎಂಬುದು ಆ ತಂದೆಯ ಅನಿಸಿಕೆಯಾಗಿತ್ತು.ಸರಿ, ಎರಡು ದಿನಗಳ ನಂತರ ತಂದೆ-ಮಗ ಇಬ್ಬರೂ ಪ್ರವಾಸ ಹೊರಟೇಬಿಟ್ಟರು. ಮಗನಿಗೆ ಪ್ರವಾಸದ ವಿವರ ಏನೇನೂ ಗೊತ್ತಿರಲಿಲ್ಲ. ಈ ಲಕ್ಷಾಧಿಪತಿ ತಂದೆ ಕಡುಬಡವರು ವಾಸವಿದ್ದ ಒಂದು ಹಳ್ಳಿಗೆ ಹೋಗಿ, ಅಲ್ಲಿಯೇ ನಾಲ್ಕು ದಿನ ತಂಗಿದ್ದೂ ಆಯಿತು. ನಂತರ ವಾಪಸ್ ತನ್ನ ಶ್ರೀಮಂತ ಬಂಗಲೆಗೆ ಮಗನೊಂದಿಗೆ ಬಂದ. ಪ್ರವಾಸ ಕುರಿತು ಮಗನಿಗೆ ಏನೆನ್ನಿಸಿದೆ ಎಂದು ತಿಳಿಯುವ ಆಸೆಯಾಯಿತಲ್ಲ, ಆ ಕ್ಷಣದಲ್ಲೇ ಮಗನನ್ನು ಕರೆದು ಕೇಳಿದ: ಕಂದಾ, ಮೊನ್ನೆ ಪ್ರವಾಸ ಹೋಗಿದ್ದೆವಲ್ಲ, ನಿಂಗೆ ಏನನ್ನಿಸ್ತು?’"ಅಪ್ಪಾ, ಅದೊಂದು ಅದ್ಭುತ ಅನುಭವ...’ ಅಂದ ಮಗ."ಸರಿ. ನಿನ್ನ ಮಾತು ಒಪ್ಕೊಂಡೆ. ಪ್ರವಾಸದಲ್ಲಿ ಬಡವರು, ಅವರ ಮಕ್ಕಳು ಬದುಕುವುದನ್ನು ನೋಡಿದೆಯಲ್ಲ, ಅದರಿಂದ ಏನು ಕಲಿತುಕೊಂಡೆ?’ ಈ ತಂದೆಯ ಪ್ರಶ್ನೆ.ಅಪ್ಪಾ, ನಾನು ಆ ಪ್ರವಾಸದಿಂದ ಅದೆಷ್ಟೋ ವಿಷಯಗಳನ್ನು ತಿಳಿದುಕೊಂಡೆ. ಹೇಳ್ತಾ ಹೋಗ್ತೀನಿ ಕೇಳಿ, ಅಂದವನೇ ಹೀಗೆಂದ: "ನಾವು ಲಕ್ಷಾಧಿಪತಿಗಳು. ಆದರೇನು? ನಮ್ಮ ಮನೇಲಿ ಒಂದೇ ಒಂದು ನಾಯಿ ಇದೆ. ಆ ಹಳ್ಳಿಯಲ್ಲಿದ್ದವರು ಕಡುಬಡವರು. ಆದರೆ ಅವರ ಬಳಿ ನಾಲ್ಕು ನಾಯಿಗಳಿವೆ. ನಮ್ಮ ಬಂಗಲೆಯೊಳಗೆ ಒಂದು ಪುಟ್ಟ ಸ್ವಿಮ್ಮಿಂಗ್ ಫೂಲ್ ಇದೆ. ಆದರೆ, ಅವರ ಮನೆಯ ಹಿಂದೆ ದೊಡ್ಡ ನದಿಯೇ ಇದೆ. ನಾವು ರಾತ್ರಿ ಮಲಗಿದಾಗ ಬೆಡ್‌ರೂಂನ ಮಿಣುಕು ದೀಪ ಮಾತ್ರ ಕಾಣುತ್ತೆ. ಆದರೆ, ಆ ಬಡವರು ಬಯಲಲ್ಲಿ ಅಂಗಾತ ಮಲಗಿ ನಕ್ಷತ್ರಗಳನ್ನು ಲೆಕ್ಕ ಹಾಕ್ತಾರೆ!ನಮಗಿರೋದು ಒಂದೇ ಕಡೆ ತೋಟ. ಆದ್ರೆ ಅವರಿಗೆ ಹತ್ತಾರು ಹೊಲಗಳಿವೆ. ನಮ್ಮ ಸೇವೆಗೆ ಅಂತಾನೇ ನಾವು ಆಳುಗಳನ್ನು ಇಟ್ಕೊಂಡಿದೀವಿ. ಆದ್ರೆ ಆ ಬಡವರು ತಮಗಿಂತ ಬಡವರ ಸೇವೆಗೆ ನಿಲ್ತಾರೆ. ನಮಗೆ, ನಮ್ಮ ಸಂಪತ್ತಿಗೆ ಏನೂ ತೊಂದರೆ ಆಗದೇ ಇರಲಿ ಅಂತ ನಾವು ಮನೆಯ ಸುತ್ತ ದೊಡ್ಡ ಕಾಂಪೌಂಡ್ ಹಾಕ್ಕೊಂಡಿದೀವಿ. ಆದ್ರೆ ಆ ಬಡವರು, ಸುತ್ತಲೂ ಗೆಳೆಯರನ್ನು ಇಟ್ಕೊಂಡು ನೆಮ್ಮದಿಯ ಬದುಕು ನಡೆಸ್ತಾ ಇದಾರೆ! ನಾವು ಶ್ರೀಮಂತರ ಮಕ್ಕಳ ಜತೆ ಆಡೋದೇ ಗೌರವ ಅಂದ್ಕೊಂಡಿದೀವಿ. ಆದ್ರೆ ಆ ಬಡವರ ಮಕ್ಕಳು ಶ್ರೀಮಂತರ ಮಕ್ಕಳ ಜತೆ ಆಡೋದನ್ನು ಹೆಮ್ಮೆ ಅಂದ್ಕೊಂಡಿದಾರೆ. ಯಾರಾದ್ರೂ ಸಂಕಟಕ್ಕೆ ಸಿಕ್ಕಿ ಅಳ್ತಾ ಇದ್ರೆ ನಾವು ಕಂಡೂ ಕಾಣದವರ ಥರಾ ಹೋಗಿಬಿಡ್ತೀವಿ. ಆದ್ರೆ ಆ ಜನ, ಅದು ತಮ್ಮದೇ ಕಷ್ಟ ಅಂದುಕೊಂಡು ಸುಖ-ದುಃಖ ವಿಚಾರಿಸ್ತಾರೆ- ಹೌದಪ್ಪಾ, ನಮ್ಮಲ್ಲಿ ಶ್ರೀಮಂತಿಕೆಯಿದೆ. ಆದರೆ, ಆ ಬಡವರ ಬಳಿ ಹೃದಯ ಶ್ರೀಮಂತಿಕೆಯಿದೆ...’ ಅಂದುಬಿಟ್ಟ.ಮಗನ ಮಾತು ಕೇಳಿ ಆ ಲಕ್ಷಾಧಿಪತಿ ತಂದೆಗೆ ಕಣ್ತುಂಬಿ ಬಂತು. ಆತ ಏನೆಂದೂ ಮಾತನಾಡದೆ ಮಗನನ್ನು ಬಾಚಿ ತಬ್ಬಿಕೊಂಡ.


ಸಾವಿನ ಸುದ್ದಿ ಕೇಳಿ ಅವನು ಖುಷಿ ಪಡುತ್ತಿದ್ದ!
ಅದೊಂದು ಪ್ರೈವೇಟ್ ಕಂಪನಿ. ಅಲ್ಲಿನ ಬಾಸ್ ವಿಪರೀತ ಸಿಡಿಮಿಡಿಯ ಮನುಷ್ಯ. ಅವನೊಂದಿಗೆ ಕೆಲಸ ಮಾಡುತ್ತಿದ್ದ ನೌಕರರನ್ನು ಇನ್ನಿಲ್ಲದಂತೆ ಕಾಡಿದ್ದ. "ಅತೀ’ ಅನ್ನಿಸುವಂತಿದ್ದ ಅವನ "ಶಿಸ್ತಿ’ನಿಂದ ಎಲ್ಲ ನೌಕರರೂ ಸುಸ್ತೆದ್ದು ಹೋಗಿದ್ದರು. ಈ ಕಂಪನಿಯೂ ಬೇಡ. ಬಾಸ್‌ನ ಸಿಡಿಮಿಡಿಯೂ ಬೇಡ. ಆತ ಕೊಡುವ ಸಂಬಳವೂ ಬೇಡ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದರು. ಆದರೆ, ಒಮ್ಮೆ ಕೆಲಸ ಬಿಟ್ಟರೆ, ತಕ್ಷಣದಲ್ಲಿಯೇ ಬೇರೊಂದು ಕಡೆ ಕೆಲಸ ಸಿಗುವುದು ಕಷ್ಟವಿತ್ತು. ಹಾಗೆಂದೇ ಎಲ್ಲ ನೌಕರರೂ ಬಾಸ್‌ನ ಬೈಗುಳ ಮತ್ತು ಅವನ ಕಿರಿಕಿರಿಯನ್ನು ಸಹಿಸಿಕೊಂಡಿದ್ದರು.ಹೀಗಿದ್ದಾಗಲೇ ಅದೊಮ್ಮೆ ಬಾಸ್‌ಗೆ ಆರೋಗ್ಯ ಹದಗೆಟ್ಟಿತು. ಬಿ.ಪಿ. ಹೆಚ್ಚಿತು. ಶುಗರ್ ನಿಯಂತ್ರಣಕ್ಕೇ ಸಿಗಲಿಲ್ಲ. ದುಬಾರಿ ಚಿಕಿತ್ಸೆ ನೀಡಿದರೂ ಬಾಸ್ ಬದುಕಲಿಲ್ಲ. ನಾಲ್ಕು ದಿನಗಳ ನಂತರ ಅವನ ಮನೆಗೆ ಒಂದು ಫೋನ್ ಬಂತು. ಆ ಕಡೆಯಿಂದ ಮಾತಾಡಿದ ವ್ಯಕ್ತಿ- "ನಾನು ಬಾಸ್ ಜತೆ ಮಾತಾಡಬೇಕು. ನಾನು ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರ’ ಎಂದ.ದೂರವಾಣಿ ಕರೆ ಸ್ವೀಕರಿಸಿದಾಕೆ ಬಾಸ್‌ನ ಹೆಂಡತಿ. ಪಾಪ, ಈ ನೌಕರನಿಗೆ ಬಾಸ್ ಮೃತಪಟ್ಟ ಸುದ್ದಿ ತಿಳಿದಿಲ್ಲವೇನೋ ಅಂದುಕೊಂಡು- "ನಿಂಗೆ ಗೊತ್ತಿಲ್ವೇನಪ್ಪಾ, ನಿಮ್ಮ ಬಾಸ್ ತೀರಿಕೊಂಡು ಆಗಲೇ ನಾಲ್ಕು ದಿನ ಆಯ್ತು’ ಅಂದು ಫೋನ್ ಇಟ್ಟಳು. ಮರುದಿನ ಅದೇ ವ್ಯಕ್ತಿ ಮತ್ತೆ ಫೋನ್ ಮಾಡಿದ. ಆಗಲೂ ಬಾಸ್ ಹೆಂಡತಿಯೇ ಫೋನ್ ಎತ್ತಿಕೊಂಡು "ಹಲೋ’ ಎಂದಳು. ಈತ "ಬಾಸ್ ಜತೆ ಮಾತಾಡಬೇಕಿತ್ತಮ್ಮಾ. ನಾನು ಅವರ ಕಂಪನಿಯ ನೌಕರ’ ಎಂದ.ಬಾಸ್ ಹೆಂಡತಿಗೆ ನೌಕರನ ದನಿಯ ಪರಿಚಯ ತಕ್ಷಣವೇ ಗೊತ್ತಾಯಿತು. ಆದರೂ, ಬಾಸ್ ಮೇಲಿನ ಅಪಾರ ಪ್ರೀತಿಯಿಂದ ಒಂದು ರೀತಿಯ ಡಿಫ್ರೆಶನ್‌ಗೆ ಒಳಗಾಗಿ ಅವನು ಹೀಗೆ ಮಾಡುತ್ತಿರಬಹುದು ಅನ್ನಿಸಿ ಮತ್ತೆ ಹೇಳಿದಳು: "ನಿಮ್ಮ ಬಾಸ್ ಐದು ದಿನಗಳ ಹಿಂದೆ ತೀರಿಕೊಂಡರು ಕಣಪ್ಪಾ... ಸಾರಿ...’ಮರುದಿನ ಮತ್ತೆ ಅವನು ಫೋನ್ ಮಾಡಿದ. ಈಕೆ ಹಲೋ ಅಂದ ತಕ್ಷಣ "ನಾನು ಬಾಸ್ ಜತೆ ಮಾತಾಡಬೇಕಿತ್ತು’ ಅಂದ. ಈಕೆಗೆ ಸ್ವಲ್ಪ ಸಿಟ್ಟೇ ಬಂತು. ಆದರೂ ತಡೆದುಕೊಂಡು-"ಅವರು ವಾರದ ಹಿಂದೆ ತೀರಿ ಹೋದರು. ನಿಮಗೆ ಗೊತ್ತಿಲ್ವಾ’ ಎಂದು ಫೋನ್ ಇಟ್ಟಳು.ಈ ಭೂಪ ಅದರ ಮರುದಿನ ಮತ್ತೆ ಫೋನ್ ಮಾಡಿ- "ಬಾಸ್ ಜತೆ ಮಾತಾಡಬೇಕಿತ್ತೂ.... ನಾನು ಅವ ರ ಕಂಪನಿಯ ಕೆಲಸಗಾರ... ಎಂದು ಬಿಟ್ಟ. ಈಕೆಗೆ ಕೆಂಡಾಮಂಡಲ ಸಿಟ್ಟು ಬಂತು. ತಕ್ಷಣವೇ ಹೇಳಿದಳು- "ನಾನ್‌ಸೆನ್ಸ್, ನೀನು ನಾಲ್ಕು ದಿನದಿಂದಲೂ ಫೋನ್ ಮಾಡ್ತಾ ಇದೀಯ. ಬಾಸ್ ಇಲ್ಲ. ಅವರು ಸತ್ತು ಹೋದ್ರು ಅಂತ ನಾನು ದಿನಾ ದಿನ ಹೇಳ್ತಾನೇ ಇದೀನಿ. ಆದ್ರೂ ನೀನು ಫೋನ್ ಮಾಡೋದು ನಿಲ್ಲಿಸಿಲ್ಲ. ಯಾಕೆ ಹೀಗೆ ಮಾಡ್ತಾ ಇದೀಯ? ಮೊದಲು ಫೋನ್ ಇಡು...’ಈ ನೌಕರ ಹಹ್ಹಹ್ಹಹ್ಹಹಾ ಎಂದು ನಗುತ್ತಾ ಹೀಗೆಂದ: "ಅಮ್ಮಾವರೇ, ಬಾಸ್ ಜತೆ ಮಾತಾಡಬೇಕು ಅಂದ ತಕ್ಷಣ ನೀವು ಹೇಳ್ತೀರಲ್ಲ? ಆ ಮಾತು ಕೇಳಿದಾಗ ನಂಗೆ ಎಷ್ಟು ಖುಷಿಯಾಗುತ್ತೆ ಗೊತ್ತ?*

ಮಗನ ಪ್ರಶ್ನೆ ಕೇಳಿ ಅಪ್ಪ ಮುತ್ತಿಡುತ್ತಿದ್ದ !
ಅದೊಂದು ಮಧ್ಯಮ ವರ್ಗದ ಕುಟುಂಬ. ಆ ಮನೆಯಲ್ಲಿದ್ದವರು ಐದೇ ಜನ. ಅಪ್ಪ-ಅಮ್ಮ, ಮಗ-ಸೊಸೆ ಮತ್ತು ಅವರ ಮುದ್ದು ಕಂದ. ಅಪ್ಪನಿಗೆ ಆಗಲೇ ೭೦ ವರ್ಷ ವಯಸ್ಸಾಗಿತ್ತು. ಮಗ ನೌಕರಿಗೆ ಹೋಗುತ್ತಿದ್ದ. ಅತ್ತೆ, ಸೊಸೆ ಅದು ಹೇಗೋ ಹೊಂದಿಕೊಂಡು ಬದುಕು ಸಾಗಿಸುತ್ತಿದ್ದರು. ಆ ಮನೆಯಲ್ಲಿ ಒಂದು ಮುದ್ದು ಕಂದ ಇತ್ತಲ್ಲ, ಅದೇ ಕಾರಣದಿಂದಾಗಿ ಯಾವ ಕಷ್ಟವೂ ಯಾರಿಗೂ ಗೊತ್ತಾಗದ ಹಾಗೆ ದಿನ ಕಳೆದು ಹೋಗುತ್ತಿತ್ತು.ಅದೊಂದು ಭಾನುವಾರದ ಸಂಜೆ. ನೌಕರಿಗೆ ರಜೆ ಇದ್ದ ಕಾರಣದಿಂದ ಮಗ ಮನೆಯಲ್ಲೇ ಇದ್ದ. ವರಾಂಡದಲ್ಲಿ ಸೋಫಾದ ಮೇಲೆ ಅಪ್ಪ-ಮಗ ಇಬ್ಬರೂ ಕೂತಿದ್ದರು. ಮಗ ಕಿವಿಗೆ ವಾಕ್‌ಮನ್ ಇಟ್ಟುಕೊಂಡು ಹಾಡು ಕೇಳುತ್ತಿದ್ದರೆ ಅಪ್ಪ ಪೇಪರ್ ಓದುತ್ತಿದ್ದರು. ಇದ್ದಕ್ಕಿದ್ದಂತೆ ಕಿಟಕಿಯಾಚೆಯಿಂದ ಯಾವುದೋ ಪಕ್ಷಿ ಕೂಗಿದಂತಾಯಿತು."ಕಂದಾ, ಅದೇನಪ್ಪಾ ಸದ್ದು? ಹಕ್ಕಿ ಕೂಗ್ತಾ ಇರೋದಾ? ಯಾವ ಪಕ್ಷಿ ಅದೂ?’ ತಂದೆ ಕೇಳಿದರು."ಅದು ಕಾಗೆ ಕಣಪ್ಪ’ ಮಗ ತಾತ್ಸಾರದಿಂದಲೇ ಉತ್ತರ ಹೇಳಿದ.ಒಂದೆರಡು ನಿಮಿಷಗಳ ನಂತರ ಆ ಪಕ್ಷಿ ಮತ್ತೆ ಕೂಗಿತು. ತಂದೆ ಮತ್ತೆ ಕೇಳಿದರು: ಕಂದಾ, ಯಾವ ಪಕ್ಷಿಯ ಕೂಗು ಅದು? "ಅದೇ ಕಣಪ್ಪಾ, ಅದು ಕಾಗೆ. ಕೇಳಿಸಿದ್ದ ತಕ್ಷಣ ನಿಂಗೆ ಅರ್ಥ ಆಗಲ್ವ?’ ಮಗ ಅದೇ ತಾತ್ಸಾರದಿಂದ ಉತ್ತರಿಸಿದ. ಐದು ನಿಮಿಷದ ನಂತರ ಮತ್ತೆ ಆ ಪಕ್ಷಿಯ ಸದ್ದು ಕಿಟಕಿಯಂಚಿನಿಂದ ಕೇಳಿಬಂತು. ತಂದೆ ಮತ್ತೆ ಪ್ರಶ್ನೆ ಕೇಳಿದರು. ಮಗ ಈ ಬಾರಿ ಛಕ್ಕನೆ ಮುಖ ಸಿಂಡರಿಸಿಕೊಂಡು "ಅದು ಕಾಗೆ, ಕಾಗೆ! ಎಷ್ಟು ಬಾರಿ ಹೇಳಬೇಕು ನಿಂಗೆ?’ ಎಂದು ಜೋರು ಮಾಡಿದ.ಎಂಟು ನಿಮಿಷ ಕಳೆದಿರಲಿಲ್ಲ. ಮತ್ತೆ ಆ ಪಕ್ಷಿಯ ಸ್ವರ ಕೇಳಿಸಿತು. ತಂದೆ, ಅದೇ ಶಾಂತ ಸ್ವರದಲ್ಲಿ ಮತ್ತೆ ಕೇಳಿದರು: "ಕಂದಾ, ಈ ಧ್ವನಿ ಯಾವ ಪಕ್ಷೀದು?’ಈ ಪ್ರಶ್ನೆ ಕೇಳಿ ಮಗನಿಗೆ ನಖಶಿಖಾಂತ ಕೋಪ ಬಂತು. ಆತ ದಢಾರನೆ ಮೇಲೆದ್ದು ಸೋಫಾವನ್ನು ಝಾಡಿಸಿ ಒದ್ದ. ನಂತರ ಕಿವಿಯಲ್ಲಿದ್ದ ಹಿಯರ್ ಫೋನ್‌ಗಳನ್ನು ಕಿತ್ತೆಸೆದು ಗಟ್ಟಿ ದನಿಯಲ್ಲಿ ಹೇಳಿದ: ಅದು ಕಾಗೆ ಕಾಗೆ ಕಾಗೆ ಕಾಗೆ ಕಾಗೆ! ಈಗಾಗ್ಲೇ ನಿಂಗೆ ಇದೇ ಮಾತನ್ನ ಮೂರು ಬಾರಿ ಹೇಳಿದ್ದೀನಿ. ಆದ್ರೂ ಮತ್ತೆ ಮತ್ತೆ ಕೇಳ್ತಾ ಇದೀಯ. ನನ್ನ ತಲೆ ತಿನ್ನಲಿಕ್ಕೆ ಅಷ್ಟು ಹೊತ್ತಿಂದ ಕಾಯ್ತಾ ಕೂತಿದ್ಯಾ? ಇವತ್ತು ನಿಂಗೆ ಅದ್ಯಾವ ದೊಡ್ಡ ರೋಗ ಬಂದಿದೆ?’ ಹೀಗೆಲ್ಲ ಕೂಗಾಡಿ ಬಾಯಿಗೆ ಬಂದಂತೆ ಮಾತಾಡಿದ. ನಂತರ ಮತ್ತೆ ಸೋಫಾದಲ್ಲಿ ಕೂತ.ಈ ತಂದೆ ಏನೂ ಮಾತಾಡಲಿಲ್ಲ. ಮೌನವಾಗಿ ಎದ್ದು ತಮ್ಮ ಕೋಣೆಗೆ ಹೋದರು. ಒಂದೆರಡು ನಿಮಿಷಗಳ ನಂತರ ನಡೆದು ಬಂದವರ ಕೈಯಲ್ಲಿ ಒಂದು ಹಳೆಯ ಡೈರಿಯಿತ್ತು. ಅದರಲ್ಲಿ ಗುರುತು ಮಾಡಿದ್ದ ಒಂದು ದಿನಾಂಕದ ಹಾಳೆಯನ್ನು ತೆಗೆದು ಮಗನ ಮುಂದಿಟ್ಟು ಸುಮ್ಮನೆ ಕೂತರು. ಅದು ಅಪ್ಪ ಬರೆದಿದ್ದ ಡೈರಿ ಎಂದು ಖಚಿತವಾದ ತಕ್ಷಣ ಮಗರಾಯ ಕುತೂಹಲದಿಂದ ಕಣ್ಣಾಡಿಸಿದ. ಅದರಲ್ಲಿ ಹೀಗಿತ್ತು: "ಇವತ್ತು ಮೂರು ವರ್ಷದ ನನ್ನ ಮಗನೊಂದಿಗೆ ಸೋಫಾದಲ್ಲಿ ಕೂತಿದ್ದೆ. ಅದೇ ವೇಳೆಗೆ ಕಾಗೆಯೊಂದು ಹಾರಿಬಂದು ಕಿಟಕಿಯ ಬಳಿ ಕೂತಿತು. ಮಗ ಕುತೂಹಲದಿಂದ "ಅಪ್ಪಾ, ಅದೇನು’ ಎಂದು ಕೇಳಿದ. ಅದು ಕಾಗೆ ಕಂದಾ ಎಂದು ಉತ್ತರ ಕೊಟ್ಟೆ. ಆ ನಂತರವೂ ಸತತ ೨೫ ಬಾರಿ "ಅಪ್ಪಾ, ಅದೇನು’ ಎಂದು ನನ್ನ ಮುದ್ದು ಮಗ ಕೇಳುತ್ತಲೇ ಇದ್ದ. ನಾನು ಒಂದೇ ಒಂದು ಬಾರಿಯೂ ಬೇಸರಿಸದೆ ಉತ್ತರ ಹೇಳಿದೆ. ಅಷ್ಟೇ ಅಲ್ಲ, ಒಂದೊಂದು ಬಾರಿ ಪ್ರಶ್ನೆ ಕೇಳಿದಾಗಲೂ ಮಗನನ್ನು ತಬ್ಬಿಕೊಂಡು ಮುತ್ತು ಕೊಟ್ಟೆ. ಅವನ ಕುತೂಹಲ ಮತ್ತು ಮುಗ್ಧ ಪ್ರಶ್ನೆ ನನಗೆ ತುಂಬಾ ಇಷ್ಟವಾಯಿತು...’ಇದೆಲ್ಲವನ್ನೂ ಓದುತ್ತಿದ್ದಂತೆ ಮಗನಿಗೆ ತನ್ನ ವರ್ತನೆ ಕುರಿತು ನಾಚಿಕೆಯಾಯಿತು. ಅಪ್ಪ ಬಾಲ್ಯದಲ್ಲಿ ತನ್ನನ್ನು ಅದೆಷ್ಟು ಪ್ರೀತಿಯಿಂದ ನೋಡಿಕೊಂಡಿದ್ದ ಎಂಬುದನ್ನು ನೆನೆದು ಹೆಮ್ಮೆಯಾಯಿತು. ಡೈರಿಯನ್ನು ಆತ ಇನ್ನಿಲ್ಲದ ಆಸೆಯಿಂದ ತಬ್ಬಿಕೊಂಡು ಗದ್ಗದನಾಗಿ ಕೇಳಿದ- ನನ್ನನ್ನು ಕ್ಷಮಿಸ್ತೀರಾ ಅಪ್ಪಾ...’


ಬೇರೆ ಹುಡುಗೀರ್‍ನನೋಡಿದ್ರೆ ಅಷ್ಟೆ...

ಈ ಹಿಂದೆ ಒಬ್ಬ ಹುಡುಗ ಗುಲಾಬಿ ಕೊಟ್ಟಿದ್ದ. to be frank ಆಗ ನಂಗೆ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತೀನೇ ಇರಲಿಲ್ಲ. ಹಾಗಂತ ಅವನ್ಗೆ ನೇರಾನೇರ ಹೇಳಿ ಕಳಿಸ್ದೆ...
ಹಿಂದಿನ ಸೀಟಲ್ಲಿ ಕುಳಿತವನೆ,ಎಷ್ಟು ಹೊತ್ತಿಗೆ ಮನೆ ಸೇರ್‍ದೆ? ಊಟ ಮಾಡಿದ್ಯಾ? ಮತ್ತೆ ಸಿಗರೇಟು ಸೇದಿದೆಯೋ ಹೇಗೆ? ಆಮೇಲೆ, ನಾಳೆ ಕೂಡ ಅದೇ ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ವಿಜಯನಗರದ ತನಕ ನನ್ನ ಜತೆ ಅದೇ ಬಸ್ಸಲ್ಲಿ ಬರ್‍ತೀಯ ತಾನೆ?ಹೌದು ಕಣೋ. ನೀನು ವಾರದಿಂದ ನನ್ನ ಹಿಂದೆ ಬಿದ್ದಿದೀಯ. ನಾನು ಪ್ರತಿ ದಿನ ಏಳೂ ನಲವತ್ತರ ಬಸ್‌ಗೆ ಬನಶಂಕರಿಯಿಂದ ಬರ್‍ತೀನಿ ಅನ್ನೋದು ನಿಂಗೆ ಗೊತ್ತಾಗಿ ಹೋಗಿದೆ. ನಾನು ಎಡಗಡೆಯ ಸೀಟಲ್ಲಿ ಕೂತ್ಕೋತೀನಿ. ಬೈಛಾನ್ಸ್ ಬಸ್ಸು ವಿಪರೀತ ರಷ್ ಆಗಿದ್ರೆ ಐದನೇ ಸೀಟ್‌ಗೆ ಅಂಟಿಕೊಂಡ ಹಾಗೆಯೇ ನಿಂತ್ಕೋತೀನಿ ಅಂತ ನಿಂಗೆ ಗೊತ್ತಾಗಿ ಹೋಗಿದೆ. ಕಿಲಾಡಿ ನೀನು. ಬಸ್ಸು ಇನ್ನೂ ಸಿಗ್ನಲ್ ದಾಟುವಾಗ್ಲೇ ಅದರೊಳಗೆ ನಾನಿದೀನೋ ಇಲ್ವೋ ಅಂತ ಪತ್ತೆ ಮಾಡಿಬಿಡ್ತೀಯ. ದಡಬಡಿಸಿ ಬಸ್ ಹತ್ತಿ, ಅದು ಹೇಗೋ ನನ್ನ ಹಿಂದಿನ ಸೀಟು ದಕ್ಕಿಸಿಕೊಂಡು ಬಿಡ್ತೀಯ. ನಾನು ಆಕಸ್ಮಿಕವಾಗಿ ತಿರುಗಿ ನೋಡಿದ್ರೆ ಸಾಕು-ಛಕ್ಕನೆ ಕಣ್ಣು ಹೊಡೀತೀಯ. ಸ್ಮೈಲ್ ಕೊಡ್ತೀಯ. ಮಾತಾಡಲು ಪ್ರಯತ್ನ ಪಡ್ತೀಯ. "ಏನು’ ಅಂತೇನಾದ್ರೂ ನಾನು ಹುಬ್ಬು ಹಾರಿಸಿದ್ರೆ, ಏನೇನೂ ಗೊತ್ತಿಲ್ಲದವನ ಥರಾ ತಲೆ ತಗ್ಗಿಸಿ ಕೂತುಬಿಡ್ತೀಯ...ಹುಡುಗಾ, ನಂಗೆ ಅದ್ಯಾಕೋ ಗೊತ್ತಿಲ್ಲ. ನೀನು ಒಂಥರಾ ಇಷ್ಟವಾಗಿದೀಯ. ಒಂದು ವಾರದ ಅವಧೀಲಿ ನಾನು ವಿಪರೀತ ಪರೀಕ್ಷೆ ಮಾಡಿದೀನಿ ಕಣೋ. ನೀನು ಫ್ಲರ್ಟ್ ಥರಾ ವರ್ತಿಸಲಿಲ್ಲ. ನನ್ನ ಮೈ ಮುಟ್ಟಲು, ಕೈ ಸವರಲು, ಕಾಲು ತುಳಿಯಲು, ಮೊಬೈಲ್ ನಂಬರ್ ಪತ್ತೆ ಹಚ್ಚಿ ಮಾತಾಡಲು ಪ್ರಯತ್ನಿಸಲಿಲ್ಲ. ಬಸ್ಸಲ್ಲಿ ವಿಪರೀತ ರಶ್ ಇದ್ದಾಗ ಕೂಡ ನೀನು ಒಂದು ಅಂತರ ಇಟ್ಟುಕೊಂಡೇ ನಿಂತಿರುತ್ತಿದ್ದೆ. ಬೇರೆ ಯಾರಿಂದಲೂ ನನಗೆ ತೊಂದರೆ ಒದಗದಂತೆ ನೋಡಿಕೊಂಡೆ. ಇದನ್ನೆಲ್ಲ ಗಮನಿಸಿ ಗಮನಿಸಿ ನಾನು-ವಾಹ್, ಈ ಹುಡುಗ ತುಂಬಾನೇ ಸಾಫ್ಟ್‌ಫೆಲೋ ಅಂದುಕೊಂಡು ಅದನ್ನೇ ನಿಂಗೆ ಹೇಳಬೇಕು ಅಂತ ಮೊನ್ನೆ ಕಾಯ್ತಿದ್ದೆನಲ್ಲ, ಆಗಲೇ ಆ ಡುಮ್ಮ ಹೊಟ್ಟೆಯ ಕಂಡಕ್ಟರ್ ತಾನು ಹೋಗುವ ಭರದಲ್ಲಿ ನನ್ನನ್ನ ಒಂದ್ಸಲ ಸುಮ್ನೆ ಹೀಗೆ ನೂಕಿಬಿಟ್ಟೆ- ಹೌದಲ್ವ ಇವನೇ, ಆಗ ಆಕಸ್ಮಿಕವಾಗಿ ನಿನ್ನ ಕೈ ನನ್ನ ಹೆಗಲು ತಾಕಿತು. ಅಷ್ಟೇ ಆಕಸ್ಮಿಕವಾಗಿ ನನ್ನ ಕಂಕುಳನ್ನೂ...ಮೆಲ್ಲನೆ ನೀ ಬಂದು ನನ್ನ ಮೈಮುಟ್ಟಿದೇನಲ್ಲೆಯ ಈ ಮನ ಝಲ್ಲೆಂದಿದೇ...ಹಾಗಾಗಿ ಬಿಡ್ತು ಕಣೋ ನಂಗೆ. ನೀನು ತಕ್ಷಣವೇ ಮೂರು ಬಾರಿ ಸಾರಿ ಕೇಳ್ದೆ-ಮೊನ್ನೆ ಮತ್ತೆ ಉಳಿದ ಯಾರಿಗೂ ಕೇಳಿಸದ ಧ್ವನಿಯಲ್ಲಿ "ಸಾರಿ’ ಅಂದುಬಿಟ್ಟೆ. ನಿನ್ನ ಈ ವರ್ತನೆ ನಂಗೆ ಎಷ್ಟೊಂದು ಖುಷಿಕೊಡ್ತು ಗೊತ್ತಾ?ಇರಲಿ, ನಂಗೆ ಇಷ್ಟವಾಗದ ಗುಣಗಳೂ ಒಂದೆರಡಿವೆ. ನೀನು ವಿಪರೀತ ಸಿಗರೇಟು ಸೇದ್ತೀಯ ಅಂತ ಕಾಣುತ್ತೆ. ಶಿಸ್ತಿಲ್ಲದೆ ಬದುಕ್ತಿದೀಯ ಅನಿಸುತ್ತೆ. ಇದಕ್ಕಿಂತ ಹೆಚ್ಚಾಗಿ ಚೆಂದದ ಹುಡುಗೀರನ್ನು ರೆಪ್ಪೆ ಬಡಿಯದೆ ನೋಡ್ತಾ ಇರ್‍ತೀಯ. ಇದೆಲ್ಲ ಸರೀನಾ? ನಾನು ನಿನ್ನನ್ನು ಒಪ್ಕೋಬೇಕು, ಪ್ರೀತಿಸಬೇಕು, ನಿನ್ನೊಂದಿಗೆ ವರ್ಷವಿಡೀ ಅದೇ ಬಸ್ಸಲ್ಲಿ ದಿನಾ ದಿನ ಬನಶಂಕರಿಯಿಂದ ವಿಜಯನಗರಕ್ಕೆ ಬರ್‍ತಾನೇ ಇರಬೇಕು. ೪೧೦ ನಂಬರಿನ ಬಸ್ಸು ನಮ್ಮ ಮಧುರ ಪ್ರೇಮಕ್ಕೆ ಸಾಕ್ಷಿಯಾಗಬೇಕು ಅನ್ನೋದೇ ನಿನ್ನ ಆಸೆಯಾಗಿದ್ರೆ-ಪ್ಲೀಸ್, ಸಿಗರೇಟು ಬಿಡು. ಸ್ವಲ್ಪ ಶಿಸ್ತು ಬೆಳೆಸ್ಕೋ. ಹುಡುಗೀರನ್ನ ಆಸೆಯಿಂದ ನೋಡುವುದನ್ನು ಕಡಿಮೆ ಮಾಡು...ಅಂದ ಹಾಗೆ, ನನ್ನ ವಿವರ ಗೊತ್ತಾಯ್ತೇನೋ ಹುಡುಗಾ? ನನ್ನ ಹೆಸರು ಮಾಧವಿ. ಇಲ್ಲೇ ಸಾರಕ್ಕಿಯವಳು ನಾನು. ಸೆಕೆಂಡ್ ಇಯರ್ ಡಿಗ್ರೀಲಿದೀನಿ. ಈ ಹಿಂದೆ ಒಬ್ಬ ಹುಡುಗ ಗುಲಾಬಿ ಕೊಟ್ಟಿದ್ದ. ಖಿo be ಜಿಡಿಚಿಟಿಞ, ಆಗ ನಂಗೆ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತೀನೇ ಇರಲಿಲ್ಲ. ಹಾಗಂತ ಅವನ್ಗೆ ನೇರಾನೇರ ಹೇಳಿ ಕಳಿಸ್ದೆ. ಆದ್ರೆ ಬರೀ ಒಂದೇ ಒಂದು ವಾರದಲ್ಲಿ ನನ್ನ ಹಿಂದಿನ ಸೀಟಲ್ಲಿ ಕೂತು ನನ್ನನ್ನು ಪಟಾಯಿಸಿಬಿಟ್ಟೆಯಲ್ಲ? ನೀನು ನೆನಪಾದಾಗಲೆಲ್ಲ-ನೀನೆ ನೀನೆ ನನಗೆಲ್ಲ ನೀನೆಮಾತು ನೀನೆ ಮನಸೆಲ್ಲಾ ನೀನೆನನ್ನ ಮನದ ತುಂಬಾ ನಿನ್ನ ಪ್ರೀತಿ ತಾನೆ... ಹಾಡು ನೆನಪಾಗುತ್ತೆ. ನಿಂಗೂ ಹೀಗೇ ಆಗ್ತದಾ? ನಾಳೆ ಸಿಕ್ತೀಯಲ್ಲ, ಉತ್ತರ ಹೇಳು.-ಬಸ್ ಗೆಳತಿ
ತೇಜಸ್ವಿ ಕೆಲವು ನೆನಪುಗಳು
* ಅದು ಲಂಕೇಶರು ಪ್ರಗತಿರಂಗ ಆರಂಭಿಸಿದ್ದ ಸಂದರ್ಭ. ಪತ್ರಿಕೆಯ ಮೂಲಕ ಲಕ್ಷಾಂತರ ಓದುಗರ ಮನಸ್ಸು ಗೆದ್ದಷ್ಟೇ ಸುಲಭವಾಗಿ ಅವರ ಮತಗಳನ್ನೂ ಪಡೆಯಬಹುದು ಎಂಬ ವಿಚಿತ್ರ ಭ್ರಮೆ ಲಂಕೇಶರಿಗಿತ್ತು. ಅದೊಮ್ಮೆ ಯಾವುದೇ ವಿಷಯ ಪ್ರತಿಭಟಿಸಲು ಒಂದು ಪ್ರತಿಭಟನಾ ಸಭೆ ಏರ್ಪಡಿಸಿಯೇ ಬಿಟ್ಟರು ಲಂಕೇಶ್. ಸಭೆಗೆ ತೇಜಸ್ವಿಯವರನ್ನೂ ಆಹ್ವಾನಿಸಿದರು. ಬಸವನಗುಡಿಯ ಲಂಕೇಶ್ ಪತ್ರಿಕೆ ಕಚೇರಿಯಿಂದ ನ್ಯಾಷನಲ್ ಕಾಲೇಜಿನವರೆಗೆ ಮೆರವಣಿಗೆ ಹೋಗುವುದೆಂದು ತೀರ್ಮಾನವಾಯಿತು. ಮೆರವಣಿಗೆಗೆ ಭಾರೀ ಜನಬೆಂಬಲ ಸಿಗಲಿಲ್ಲ. ನಂತರ ಲಂಕೇಶ್ ಪತ್ರಿಕೆಗೆ ಕಚೇರಿಯಲ್ಲಿ ಗೆಳೆಯರು ಸಭೆ ಸೇರಿದಾಗ ತೇಜಸ್ವಿ ಹೇಳಿಯೇಬಿಟ್ಟರು:ರೀ ಲಂಕೇಶ್, ಏನ್ರೀ ಇದು, ನಿಮ್ಗೆ ಬುದ್ಧಿ ಗಿದ್ದಿ ಇದೆಯೇನ್ರಿ? ಈ ರಾಜಕೀಯ ಹೊಲಸೆದ್ದು ಹೋಗಿದೆ. ರಾಜಕಾರಣಿಗಳು ಕುಲಗೆಟ್ಟು ಹೋಗಿದಾರೆ. ಅವರ ಮಧ್ಯೆ ನುಗ್ಗಿ, ಹೋರಾಡ್ತೀನಿ ಅಂತೀರಲ್ಲ, ಇದೆಲ್ಲ ಆಗುವ ಹೋಗುವ ಕೆಲಸವಾ? ಇದು ಬಿಟ್ಟು ನಿಮ್ಗೆ ಬೇರೆ ಏನೂ ಕೆಲಸ ಇರಲಿಲ್ವ?* ೧೯೮೩-೮೪ರಲ್ಲಿ ನಡೆದ ಪ್ರಸಂಗ. ಆಗ ರೈತ ಸಂಘದ ಅಬ್ಬರ ಜೋರಾಗಿತ್ತು. ರೈತ ವಿದ್ಯಾರ್ಥಿ ಒಕ್ಕೂಟವೂ ಹುಟ್ಟಿಕೊಂಡಿತ್ತು. ವಿದ್ಯಾರ್ಥಿ ನಾಯಕರಿಗೆ ತೇಜಸ್ವಿಯವರನ್ನು ಸಭೆಗೆ ಕರೆ ತರಬೇಕೆಂಬ ಆಸೆ. ಅದು ಹೇಗೋ ತೇಜಸ್ವಿಯವರನ್ನು ಒಪ್ಪಿಸಿದ್ದಾಯಿತು. ರೈತ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗ ತೇಜಸ್ವಿ ಛಕ್ಕನೆ ಹೀಗೆಂದರು: "ಹೋಗ್ರೋ ಹೋಗ್ರೋ, ನಿಮ್ದೆಲ್ಲಾ ಬರೀ ಬೂಟಾಟಿಕೆ. ಈಗ ಮಾತ್ರ ಕ್ರಾಂತಿ ಕ್ರಾಂತಿ ಅಂತ ಕೊಚ್ಕೋತೀರ. ಆಮೇಲೆ ವರದಕ್ಷಿಣೆ ತಗೊಂಡು ಮದುವೆಯಾಗ್ತೀರ!’* ಕುವೆಂಪು ಅವರ ಜನ್ಮದಿನದ ಅಂಗವಾಗಿ ೨೯, ೧೯೯೮ರಲ್ಲಿ ಕುವೆಂಪು ಸಾಹಿತ್ಯ ವಿಮರ್ಶೆಯ ಕಾರ್‍ಯಕ್ರಮ ನಡೆಯಿತು. ಅದು ನಡೆದದ್ದು ಕುಪ್ಪಳಿಯ ಕಾಡಿನ ಮಧ್ಯೆ. ಆ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ವಿಮರ್ಶಕರು ಬಂದಿದ್ದರು. ಕುವೆಂಪು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಭೆಗೆ ಬಂದಿದ್ದವರು ಪ್ರಶ್ನೆ ಕೇಳಿದರು. ವಿಮರ್ಶಕರು ಇದಕ್ಕೆಲ್ಲ ತಮ್ಮದೇ "ಲೆವೆಲ್’ನ ಗ್ರಾಂಥಿಕ ಭಾಷೆಯಲ್ಲಿ ಉತ್ತರ ಕೊಟ್ಟರು. ಅಲ್ಲಿ ಒಬ್ಬ ಪ್ರೇಕ್ಷಕನಂತೆ ಕೂತಿದ್ದ ತೇಜಸ್ವಿ ತಾವೂ ಒಂದು ಪ್ರಶ್ನೆ ಹಾಕಿದರು. ತಕ್ಷಣವೇ ವರಸೆ ಬದಲಿಸಿದ ಚಿಂತಕರು ಆಡುಭಾಷೆಯಲ್ಲಿ ಉತ್ತರ ಹೇಳಿಬಿಟ್ಟರು. ಆಗ ತೇಜಸ್ವಿ- "ಎಲ್ಲ ಪ್ರಶ್ನೆಗೂ ಇದೇ ಭಾಷೇಲಿ ಉತ್ತರ ಹೇಳ್ರಯ್ಯ. ಎಲ್ಲ ಜನರಿಗೂ ಅರ್ಥವಾಗುವ ಹಾಗೆ ಬೊಗಳಿ’ ಎಂದು ಚಿಂತಕರನ್ನೆಲ್ಲ ಬೆಚ್ಚಿ ಬೀಳಿಸಿದ್ದರು.* ತೇಜಸ್ವಿಯವರ "ಕರ್ವಾಲೋ’ ಪಿಯುಸಿಗೆ ಪಠ್ಯವಾಗಿದ್ದ ಸಂದರ್ಭ. ವಯೋ ಸಹಜ ಕುತೂಹಲದ ಕಾರಣವೇ ಇರಬೇಕು-ಕರ್ವಾಲೋ ಎಲ್ಲ ವಿದ್ಯಾರ್ಥಿಗಳಿಗೂ ವಿಪರೀತ ಇಷ್ಟವಾಯಿತು. ಅದರಲ್ಲಿ ಬರುವ ಹಾರುವ ಓತಿ ಎಂಬ ಜೀವಿ ಈಗಿಲ್ಲ. ಅದು (?) ಒಂದರ ಮುಂದೆ ಆರು ಸೊನ್ನೆ ಹಾಕಿದಾಗ ಬರುತ್ತಲ್ಲ, ಅಷ್ಟು ವರ್ಷದ ಹಿಂದೆ ಬದುಕಿತ್ತು ಎಂದು ತೇಜಸ್ವಿಯವರೇನೋ ಬರೆದಿದ್ದರು. ಆದರೆ ಭದ್ರಾವತಿ-ತೀರ್ಥಹಳ್ಳಿ ಸೀಮೆಯ ಮಂಜಯ್ಯ ಎಂಬ ಕಾಲೇಜು ವಿದ್ಯಾರ್ಥಿಯೊಬ್ಬ ಹಾರುವ ಓತಿಯಂಥದೇ ಜೀವೀ (?)ಯನ್ನು ಪತ್ತೆ ಹಚ್ಚಿ ಅದನ್ನು ಹಿಡಿದೂ ಬಿಟ್ಟಿದ್ದ. ಈ ವಿಷಯವಾಗಿ ತೇಜಸ್ವಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಹಲವರಿಗಿತ್ತು. ಆದರೆ ತೇಜಸ್ವಿ ಹಾರಿಕೆಯ ಉತ್ತರ ಹೇಳಿ ಜಾರಿಕೊಂಡರು.ತೇಜಸ್ವಿ ಯಾಕೆ ಹಾಗೆ ಮಾಡಿದರು? ಗೊತ್ತಾಗಲಿಲ್ಲ. ಸರಳ ಸತ್ಯ ಏನೆಂದರೆ-ಅವರ ಕಥೆಗಳು ಅರ್ಥವಾಗುತ್ತಿದ್ದವು. ಆದರೆ ಬಹಳ ಸಂದರ್ಭದಲ್ಲಿ ತೇಜಸ್ವಿಯವರು ಅರ್ಥವಾಗುತ್ತಿರಲಿಲ್ಲ...* ಕುವೆಂಪು ಅವರ ನಿಧನದ ನಂತರ ತೇಜಸ್ವಿ "ಅಣ್ಣನ ನೆನಪು’ ಬರೆಯಲು ಆರಂಭಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನ ಮಾಲೆ ವಾರವಾರವೂ ಪ್ರಕಟವಾಗುತ್ತಿತ್ತು. ಕುವೆಂಪು ಅವರ ಹತ್ತು ಹಲವು ಮುಖ ಅಲ್ಲಿ ಅನಾವರಣವಾಗುತ್ತಿತ್ತು. ಶೇವಿಂಗ್ ಮಾಡಿದ ನಂತರ ಆ ಬ್ಲೇಡ್‌ನ ಮೇಲೆ ೧, ೨, ೩ ಎಂದು ಕುವೆಂಪು ಪೆನ್ಸಿಲ್‌ನಿಂದ ಬರೆಯುತ್ತಿದ್ದರು. ಒಂದು ಬ್ಲೇಡ್‌ನಿಂದ ಕನಿಷ್ಠ ನಾಲ್ಕು ಬಾರಿ ಶೇವಿಂಗ್ ಮಾಡಲೇಬೇಕು ಎಂಬುದು ಅವರ ನಿರ್ಧಾರವಾಗಿತ್ತು ಎಂದೂ ಒಮ್ಮೆ ತೇಜಸ್ವಿ ಬರೆದಿದ್ದರು. ಆಗ ಹಿರಿಯರು ಅನ್ನಿಸಿಕೊಂಡ ಅದೆಷ್ಟೋ ಜನ-ಛೆ, ಕುವೆಂಪು ಎಷ್ಟೊಂದು ದೊಡ್ಡ ಮನುಷ್ಯ. ಅವರ ಬಗ್ಗೆ ಹೀಗೆಲ್ಲಾ ಬರೀಬಹುದಾ? ಇದು ಸರಿಯಾ? ಎಂದು ಪ್ರಶ್ನಿಸಿದ್ದರು. ತೇಜಸ್ವಿ ಬರಹವನ್ನು ಕಟುವಾಗಿ ಟೀಕಿಸಿದ್ದರು.ಆಗ ತೇಜಸ್ವಿ ಹೇಳಿದ್ದು: "ಕುವೆಂಪು ನನ್ನ ತಂದೆ. ಅವರು ನಮ್ಮ, ನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ. ಅವರಿಗೂ ರಾಗ-ದ್ವೇಷಗಳಿದ್ದವು. ಅವರದೇ ಆದ ಬದುಕಿತ್ತು. ಇದ್ದುದನ್ನು ಇದ್ದಂತೆ ಹೇಳಿದೀನಿ. ಅವರಲ್ಲಿ ತಪ್ಪೇನು ಬಂತು? ನನ್ನ ತಂದೆಯೊಂದಿಗೆ ನನಗಿದ್ದಂಥ ಒಡನಾಟ ಈ ಸಾಹಿತಿಗಳಿಗಿತ್ತೆ...’ ಅಷ್ಟೇ, ಟೀಕಿಸುತ್ತಿದ್ದ ಬಾಯಿಗಳು ಬಂದ್ ಆದವು.ತೇಜಸ್ವಿ ಬಿ.ಎ.ಯಲ್ಲಿ ಇಂಗ್ಲಿಷಿನಲ್ಲಿ ಫೇಲಾಗಿದ್ರು. ಅವರ ತರಗತಿಯಲ್ಲಿದ್ದ ಒಟ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ಮಾತ್ರ ತೇರ್ಗಡೆಯಾಗಿದ್ದ. ಉಳಿದವರೆಲ್ಲ ಡುಮ್ಕಿ. ಸ್ವಾರಸ್ಯವೆಂದರೆ ಎಲ್ಲರೂ ಚನ್ನಾಗಿ ಉತ್ತರ ಬರೆದಿದ್ದೇವೆಂದೇ ಭಾವಿಸಿದ್ದರು. ಅದಕ್ಕೆ ಕಾರಣ- ಪರೀಕ್ಷೆಯಲ್ಲಿ ಬಹುಮಂದಿ ಊಹಿಸಿದ ಪ್ರಶ್ನೆಗಳೇ ಇದ್ದವು. ಪರೀಕ್ಷಕರು ಬೇಕೆಂದೇ ಫೇಲ್ ಮಾಡಿದ್ದಾರೆ ಎಂದು ಎಲ್ಲ ವಿದ್ಯಾರ್ಥಿಗಳೂ ಆಗ ಕುಲಪತಿಯಾಗಿದ್ದ ಕುವೆಂಪು ಅವರಿಗೇ ದೂರು ನೀಡಿದರಂತೆ. ಕುತೂಹಲದಿಂದ ಎಲ್ಲರ ಉತ್ತರ ಪತ್ರಿಕೆಗಳನ್ನೂ ತರಿಸಿ ಪರೀಕ್ಷಿಸಿದ ನಂತರ ಕುವೆಂಪು ಹೇಳಿದ್ದು: ಅಲ್ಲಯ್ಯ ತೇಜಸ್ವೀ, ಆಗಲೇ ಡಿಗ್ರಿಗೆ ಬಂದಿದೀಯ. ನಿಂಗೆ ಯಾವ ಪದಕ್ಕೆ ಯಾವ ಸ್ಪೆಲ್ಲಿಂಗ್ ಅಂತ ಗೊತ್ತಿಲ್ಲವಾ? he, she ಎಂದು ಬರೆಯಬೇಕಾದ ಜಾಗದಲ್ಲಿ hi, shi ಎಂದು ಬರೆದಿದ್ದೀಯ? ಪರೀಕ್ಷಕರು ನಿಮಗೆಲ್ಲ ೨೭ ನಂಬರ್ ಕೊಟ್ಟು ತಪ್ಪು ಮಾಡಿದಾರೆ. ನಾನಾಗಿದ್ರೆ ನಿಮಗೆಲ್ಲ ಸೊನ್ನೆ ಕೊಡ್ತಿದ್ದೆ...* ಹೌದು. ತಮ್ಮ ಅನನ್ಯ ಕಥೆಗಳ ಮೂಲಕ ನಾವು ಕನಸು ಮನಸಿನಲ್ಲೂ ಊಹಿಸಿರದ ವಿಸ್ಮಯ ಲೋಕವೊಂದನ್ನು ತೇಜಸ್ವಿ ತೆರೆದಿಟ್ಟರು. ಅದಕ್ಕೆ ಒಂದು ಪುಟ್ಟ ದೃಷ್ಟಾಂತ:"ಒಮ್ಮೆ ನಾನು ತೋಟದಲ್ಲಿ ಹೋಗುತ್ತಿದ್ದಾಗ ಮಾಸ್ತಿಯ ಮಗ ನೆಲದ ಬಿಲದಲ್ಲಿ ಇಡೀ ಕೈ ಹೋಗುವಷ್ಟು ಆಳಕ್ಕೆ ಕೈ ಹಾಕಿ ನಾನು ನೋಡುತ್ತಿದ್ದಂತೆಯೇ ಏನನ್ನೋ ತೆಗೆದು ಗಬಕ್ಕನೆ ಬಾಯಿಗೆ ಹಾಕಿಕೊಂಡು ಅಗಿದು ತಿಂದ. ದೂರದಿಂದ ಇದನ್ನು ನೋಡಿದ ನಾನು ಏನನ್ನು ತಿಂದೆ ಎಂದು ಕೇಳಿದೆ. ಅವನು "ಈಚು ಸಾಮಿ’ ಎಂದ. ಹಾಗೆಂದರೆ ಏನೆಂದು ಗೊತ್ತಾಗದೆ ಮತ್ತೆ ಕೇಳಿದೆ: ಅಯ್ಯೋ, ಈಚು ಸಾಮೀ, ಈಚು ಅಂದ್ರೆ ಗೊತ್ತಿಲ್ವಾ? ಒಂದ್ಸಾರಿ ತೋರಿಸ್ತೀನಿ. ತಡೀರಿ’ ಎಂದ... ಅವನು ತಿಂದದ್ದೇನೆಂದು ತೇಜಸ್ವಿ ಬರೆದಿಲ್ಲ. ಈಚು ಎಂದರೇನೆಂದು ಅವರಿಗೆ ಗೊತ್ತಿರಲಿಲ್ಲವಾ? ಇರಬಹುದು. ಗೊತ್ತಿತ್ತಾ? ಹಾಗೂ ಇರಬಹುದು...ತೇಜಸ್ವಿಯವರು ನಮ್ಮೆದುರು ಹರಡಿಟ್ಟ ಅದೆಷ್ಟೋ ಪಾತ್ರ-ಪ್ರಸಂಗಗಳನ್ನು ಮರೆಯಲಾದೀತೆ?
ನಾನು ಎಂದೆಂದೆಂದೆಂದೂ ನಿನ್ನವನು...ಹೃದಯೇಶ್ವರಿ,ಇಂಟ್ರೋ : ಈಗ ಇಬ್ಬರೂ ದೂರವಿದ್ದೇವೆ ಎಂದು ಕೊರಗಬೇಡ. ಅಗಲಿಕೆಯ ನೋವು ಪ್ರೇಮಿಗಳನ್ನು ಮತ್ತೂ ಹತ್ತಿರ ಮಾಡುತ್ತದೆ. ಪರಸ್ಪರರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳುವ; ನಮ್ಮನ್ನು ನಾವೇ ನಿಗ್ರಹಿಸುವ ಶಕ್ತಿ ಕೊಡುತ್ತದೆ ಎಂಬುದನ್ನು ನೆನಪಿಟ್ಟುಕೋ. ಅನುಮಾನ ಬೇಡ. ನಾನು ಎಂದೆಂದೆಂದೆಂದೂ ನಿನ್ನವನು...ನೀನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರುವುದನ್ನು ತಿಳಿದು ಸಂತೋಷವಾಯಿತು. ನೀನು ಮನೆಯಲ್ಲಿ ಹಿರಿಯರ ಮನ ಮೆಚ್ಚುವಂತೆ ನಡೆದುಕೊಂಡು ಸಂತೋಷದಿಂದ ವಿದ್ಯಾಭ್ಯಾಸದಲ್ಲಿ ಮುಂದುವರಿದರೆ ನನ್ನ ಪ್ರಯತ್ನಗಳು ಫಲಿಸಿದಂತೆ. ಗುಣವತಿಯಾದ ನೀನು ಈಗ ಮಾತ್ರವಲ್ಲದೆ ಮುಂದೆಯೂ ಹಾಗೆ ನಡೆಯುವಿಯೆಂದು ಭಾವಿಸಿದ್ದೇನೆ. ಹಾಗೆ ನಡೆದಾಗಲೇ ನೀನು ಗೃಹಲಕ್ಷ್ಮಿಯಾಗುವುದು; ನನ್ನ ಮನೆಯ ನಂದಾದೀಪವಾಗುವುದು...ನಿನಗೆ ಓದುವ ಸೌಲಭ್ಯ ಕಲ್ಪಿಸಿದುದರಿಂದ ನನಗೆ ಸುಖ, ಸಂತೋಷ, ಸಮಾಧಾನಗಳು ಲಭಿಸಿವೆ. ಇದು ನಮಗಿಬ್ಬರಿಗೂ ಅಗಲಿಕೆಯ ವಿರಹತಾಪ ತಂದಿದೆಯೆಂಬುದು ನಿಜ. ಅದನ್ನು ಇಬ್ಬರೂ ಒಟ್ಟಾಗಿ ಎದುರಿಸೋಣ. ಅಗಲಿಕೆಯಿಂದಾಗಿಯೇ ಮಧುರ ಮಿಲನದ ಅವಕಾಶಗಳು ಹೆಚ್ಚಿದೆಯಲ್ಲವೇ? ಪ್ರೇಮಾನುರಾಗಗಳು ಹೆಚ್ಚುವುದಕ್ಕೆ ಅದೂ ಪ್ರೇರಕ ಶಕ್ತಿಯಾಗಿಲ್ಲವೇ? ನಮಗೆ ಒಳ್ಳೆಯದನ್ನು ಮಾಡದ ಏನು ತಾನೆ, ಯಾವ ವ್ಯವಸ್ಥೆ ತಾನೆ ಜಗತ್ತಿನಲ್ಲಿದೆ? ಒಂದೊಂದರಿಂದಲೂ ಆಗುವ ಒಳಿತನ್ನು ಗಮನಿಸುವ ದೊಡ್ಡ ಮನಸ್ಸನ್ನು ಹೊಂದಿಲ್ಲದಿರುವುದೇ ನಮ್ಮ ದುಃಖದ ಮೂಲವೆಂದು ತೋರುತ್ತದೆ. ಈಗಾಗಲೇ "ಬೆಂಗಳೂರಿಗೆ ವರ್ಗ ಮಾಡಿ’ ಎಂದು ಮೇಲಧಿಕಾರಿಗಳನ್ನು ಕೇಳಿದ್ದೇನೆ. ಇಂದಲ್ಲ ನಾಳೆ ಅಲ್ಲಿಗೆ ಬಂದೇ ಬರುತ್ತೇನೆಂಬ ಭರವಸೆ ನನಗಿದೆ.ನನಗೂ ಸದಾ ನಿನ್ನ ಹಂಬಲವೇ. ನನ್ನ ತರಗತಿಯಲ್ಲೂ ಆಗಿಂದಾಗ್ಗೆ ಮೈಮರೆತು ನಿನ್ನ ವಿಷಯವನ್ನೇ ಹೇಳುತ್ತೇನೆ. ಯಾವ ಪಾಠ ಮಾಡಬೇಕಾದರೂ ಸತಿ-ಪತಿಗಳ ವಿಷಯ ಅದರಲ್ಲಿದ್ದೇ ಇರುವುದು ಹೇಗೋ ಕಾಣಿಸುತ್ತದೆ. ಸರಿ, ತಕ್ಷಣ ಸ್ವಂತದ ಅನುಭವದ ಕಂತೆ ಬಿಚ್ಚುತ್ತೇನೆ. ವಿಷಯ ಅರ್ಥಮಾಡಿಕೊಳ್ಳಲು ಇದರಿಂದ ವಿದ್ಯಾರ್ಥಿಗಳಿಗೂ ಸುಲಭವಾಗಿದೆಯೆನ್ನು! ಹಿಂದಿನ ವರ್ಷ ಮದುವೆಯಾಗುವ ಮೊದಲು ಮಾಡಿದ ಪಾಠಗಳನ್ನೇ ಈಗ ಮತ್ತೆ ಹೇಳಲು ಹೊರಟಾಗ ಹೊಸ ಅರ್ಥ, ಹೊಸ ಅಂಶಗಳು ಕಾಣುತ್ತಿವೆ. ಜಗತ್ತೇ ಹೊಸದಾಗಿರುವಂತಿದೆ. ಪಾಠ ಆದ ನಂತರ ನನ್ನ ಒಳ್ಳೆಯ ಲೆಕ್ಚರ್ ಕೇಳಲು ನೀನಿಲ್ಲವಲ್ಲ ಎಂದು ಕೊರಗುತ್ತೇನೆ. ಕಾಲಾಯ ತಸ್ಮೈನಮಃ ಎನ್ನದೇ ಬೇರೆ ದಾರಿ ಇಲ್ಲ.ನೀನು ನನ್ನ ಹೃದಯೇಶ್ವರಿಯೂ ಹೌದು, ಚರಣದಾಸಿಯೂ ಹೌದು, ನಾನು ನಿನ್ನ ಚರಣದಾಸನೆಂದು ಒಪ್ಪುವುದಾದರೆ ಮಾತ್ರ. ಮದುವೆ ಎಂದರೆ ಯಜಮಾನ, ಯಜಮಾನಿ ಮತ್ತು ಇಬ್ಬರು ಆಳುಗಳು-ಒಟ್ಟಿನಲ್ಲಿ ಇಬ್ಬರೂ ಇರುವ ಸಂಸ್ಥೆ ತಾನೆ? ಹಲವಾರು ಬಾರಿ ಕನಸಿನಲ್ಲೂ ನಿನ್ನನ್ನು ಕಂಡು, ಕೂಡಿದೆನು. ಪ್ರೇಮಾನುರಾಗದ ಇನಿಯಳ ಸಾನ್ನಿಧ್ಯ ಯಾರಿಗೆ ತಾನೇ ಬೇಡ? ಅದರಲ್ಲೂ ನನಗೆ! ಸದಾ ನಿನ್ನ ಬಳಿಯಲ್ಲೇ ಇರಬೇಕೆಂದು ಹಂಬಲಿಸುವ...ನಿನ್ನವ
ವಿವರಿಸಿ ಹೇಳಲಾರೆ ನಂಗೆ ಬೇಜಾರಾಗಿದೆ!ಶ್ವೇತಾ,ನೇರವಾಗಿ, ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದೀನಿ. ನಾನು ಇಂಥ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ನಿನ್ನ ಹಠ ಸಾಧನೆಗೆ ನನ್ನನ್ನೇ ಮರೆತು ಶಾಪಿಂಗ್ ಹೋಗ್ತೀಯ ಅಂದುಕೊಂಡಿರಲಿಲ್ಲ. ನಿನ್ನ ಗೆಳತಿಯರೊಟ್ಟಿಗೆ, ಕಾಫಿಡೇಗೆ ನಂಗೊಂದು ಮಾತೂ ಹೇಳದೆ ನಡೆದೇ ಬಿಡ್ತೀಯ ಅಂತ ನಾನು ಕಲ್ಪಿಸಿಕೊಂಡಿರಲಿಲ್ಲ. ನನ್ನನ್ನು ಒಂದು ಮಾತೂ ಕೇಳದೆ ಹೊಸ ಚೂಡಿದಾರ್ ತಗೋತೀಯ ಅಂತ... ಹೌದು ಶ್ವೇತಾ, ಹೀಗೆಲ್ಲ ನೀನು ಮಾಡಬಹುದು ಅಂತ ನಂಗೆ ಕನಸೂ ಬಿದ್ದಿರಲಿಲ್ಲ.ನಿಂಗೆ ಪ್ರಪೋಸ್ ಮಾಡಿದೆನಲ್ಲ? ಅವತ್ತೇ ಹೇಳಿಬಿಟ್ಟಿದ್ದೆ: "ನೋಡಿ ಮೇಡಂ, ನಾನು ತುಂಬಾ ಪೊಸೆಸೀವ್ ಫೆಲೋ. ಪರಮಸ್ವಾರ್ಥಿ ನಾನು. ಯಾವುದೇ ವಸ್ತು ಆಗಿರಲಿ, ನಾನು ಇಷ್ಟಪಡ್ತಿದೀನಿ ಅಂದ ಮೇಲೆ ಮುಗೀತು. ಅದು ನನ್ನದಾಗಬೇಕು. ನನಗೆ ಮಾತ್ರ ಸಿಗಬೇಕು. ಆ ವಸ್ತುವನ್ನು ಯಾರೂ ನೋಡಬಾರದು, ಮುಟ್ಟಬಾರದು, ದಕ್ಕಿಸಿಕೊಳ್ಳಬಾರದು, ಆ ಕುರಿತು ಮಾತೂ ಆಡಬಾರದು-ಹೀಗೆಲ್ಲ ಅಂದುಕೊಳ್ತೀನಿ ನಾನು. ಯಾಕಂತ ಗೊತ್ತಿಲ್ಲ, ಮೊದಲ ನೋಟಕ್ಕೇ ನೀವು ಇಷ್ಟವಾಗಿದೀರ. ನಾನು ಒಬ್ಬನೇ ಬದುಕಿದ್ರೆ ಹೇಗಿರ್‍ತೀನೇ ಗೊತ್ತಿಲ್ಲ. ಆದ್ರೆ ನೀವು ಜತೆಯಾಗ್ತೀರಿ ಅಂದ್ರೆ ಖುಷಿಯಾಗಿ ಬದುಕಬಲ್ಲೆ ಮೇಡಂ. ಪ್ಲೀಸ್, ನನ್ನನ್ನ, ನನ್ನ ಪ್ರೀತೀನ ಒಪ್ಕೊಳ್ಳಿ. ನಾನು ಪೊಸೆಸೀವ್ ಫೆಲೊ ಅನ್ನೋದು ಬಿಟ್ರೆ ಒಳ್ಳೇ ಹುಡುಗ ಮೇಡಂ. ನಂಗೇನೂ ಜಾಸ್ತಿ ಸಿಟ್ಟು ಬರಲ್ಲ. ನಾನು ಯಾರೊಂದಿಗೂ ಜಗಳ ಮಾಡಲ್ಲ, ಠೂ ಬಿಡಲ್ಲ. ಸಿಗರೇಟಿನಂಥ ದುಶ್ಚಟ ನಂಗಿನ್ನೂ ಹತ್ಕೊಂಡಿಲ್ಲ... ಸದ್ಯಕ್ಕೆ ಇಷ್ಟು ವಿವರ ಸಾಕು ಅಂದ್ಕೊತೀನಿ. ನೀವು ನನ್ನ ಪ್ರೀತೀನ ಒಪ್ಕೊಬೇಕು...’ ಅಂದಿದ್ದೆ.ನಂಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಸಡಬಡ ಮಾತಿಗೆ ನೀನು ಎರಡನೇ ಮಾತೂ ಹೇಳಲಿಲ್ಲ. ಒಂದು ವಾರ ಟೈಂ ಕೊಡ್ತೀರ. ಸ್ವಲ್ಪ ಯೋಚನೆ ಮಾಡಿ ಹೇಳ್ತೀನಿ ಅಂದುಬಿಟ್ಟೆ. "ಆಗಲ್ಲ’ ಅನ್ನಲಿಕ್ಕೆ ನನಗೂ ಕಾರಣ ಇರಲಿಲ್ಲವಲ್ಲ? ಆಮೇಲೆ ಒಂದು ವಾರವಲ್ಲ, ಒಂದಿಡೀ ತಿಂಗಳು ನನಗೆ ಸಿಗಲೇ ಇಲ್ಲ ನೀನು. ನಂತರ ಸಿಕ್ಕವಳ ತುಟಿಯಂಚಿನಲ್ಲಿ ಕಿರುನಗೆಯಿತ್ತು. ಮುಡಿಯಲ್ಲಿ ಗುಲಾಬಿಯ ಮೊಗ್ಗಿತ್ತು!ಹೌದು ನವೀನ್, ಐ ಲವ್ ಯು ಟೂ ಅಂದೆಯಲ್ಲ, ಆ ಕ್ಷಣದಿಂದಲೇ ನಿನ್ನನ್ನ ನನ್ನ ವಸ್ತು ಎಂದೇ ನಾನು ಭಾವಿಸಿಬಿಟ್ಟೆ. ನಿಂಗೆ ಕಾಫಿ ಬೇಕಾ? ಚಾಕೊಲೇಟ್ ಬೇಕಾ? ಐಸ್‌ಕ್ರೀಂ ಬೇಕ? ಜೀನ್ಸ್ ಬೇಕಾ? ಚೂಡಿದಾರ್ ಬೇಕಾ? ಬಿಂದಿ ಬೇಕಾ? ನಿನ್ನ ಚೆಂದುಟಿಯ ಥರದ್ದೇ ಆದ ಲಿಪ್‌ಸ್ಟಿಕ್ ಬೇಕಾ? ಫಳಫಳ ಹೊಳೆವ ವಾಚ್ ಬೇಕಾ? ಅದನ್ನೆಲ್ಲಾ ನಾನೇ ತಂದುಕೊಡಬೇಕು ಅಂದುಕೊಂಡು ಬಿಟ್ಟೆ. ಹಾಗೆಯೇ ಬದುಕಿ ಬಿಟ್ಟೆ ಕೂಡಾ. ಒಂದೊಂದ್ಸಲ ನನ್ನ ಪೊಸೆಸೀವ್‌ನೆಸ್ ಕಂಡು ನಂಗೇ ಬೇಸರ ಆಗ್ತಿತ್ತು. ಛೆ, ಛೆ, ನಾನು ಹೀಗೆಲ್ಲಾ ವರ್ತಿಸಬಾರ್‍ದು ಅಂದುಕೊಂಡಾಗಲೇ ನಿನ್ನ ಗೆಳತಿಯೊಬ್ಬಳು ಭುಜ ಮುಟ್ಟುತ್ತಿದ್ದುದು, ಯು ಲುಕ್ಸ್ ಸೋ ಸ್ವೀಟ್ ಎಂದು ಕೆನ್ನೆ ತಟ್ಟುತ್ತಿದ್ದುದು ಕಾಣ್ತಾ ಇತ್ತಲ್ಲ, ಆ ಕ್ಷಣವೇ ನಾನು ಸಿರ್ರನೆ ಸಿಡುಕ್ತಾ ಇದ್ದೆ. ನಿನ್ನನ್ನು ಹುಡುಗರಿರಲಿ, ಹುಡುಗಿಯರು ಮಾತಾಡಿಸಿದ್ರೂ ನಂಗೆ ವಿಪರೀತ ಸಿಟ್ಟು ಬರ್‍ತಾ ಇತ್ತು.ಇದೆಲ್ಲಾ ನಿಂಗೂ ಗೊತ್ತಿತ್ತು ಅಲ್ವಾ ಶ್ವೇತಾ? ಹಾಗಿದ್ರೂ ನೀನು ಮೊನ್ನೆ ಸೀದಾ ಎಂಜಿ ರೋಡ್‌ಗೆ ಹೋಗಿಬಿಟ್ಟಿದೀಯ. ಗೆಳತಿಯರ ಜೊತೆ; ಅವರ ಪಾರ್ಟನರ್‌ಗಳ ಜತೆ ಗಂಟೆಗಟ್ಟಲೆ ಹರಟೆ ಹೊಡೆದಿದೀಯ. ಅಲ್ಲಿಂದ ಸೀದಾ ಕಮರ್ಷಿಯಲ್ ಸ್ಟ್ರೀಟ್‌ಗೆ ಬಂದು ಜೀನ್ಸ್ ಚೂಡಿದಾರ್ ಖರೀದಿ ಮಾಡಿದೀಯ. ಆಮೇಲೆ ಏನೂ ಗೊತ್ತಿಲ್ಲದವಳ ಥರಾ ಒಂದು ಎಸ್ಸೆಮ್ಮೆಸ್ ಕಳಿಸಿ- ಸಾರಿ ಕಣೋ ನವೀನ್. ನಾನಾದ್ರೂ ಏನು ಮಾಡ್ಲಿ? ಹಾಳಾದ್ದು ಆಸೆ ನೋಡು, ಆಸೆಗೆ ಬಲಿಯಾಗಿ ಹೀಗೆಲ್ಲ ಮಾಡಿಬಿಟ್ಟೆ. ನಿಜ ಹೇಳ್ತಿದೀನಿ. ಕಾಫಿಡೇನಲ್ಲಿ ಆಕಸ್ಮಿಕವಾಗಿ (ನಿಜವಾ?) ನನ್ನ ಗೆಳತಿಯ ಬಾಯ್‌ಫ್ರೆಂಡ್ ಕೈ ತಾಕಿದಾಗ ಒಂಥರಾ ಆಗಿಬಿಡ್ತು. ಜೀನ್ಸ್ ತಗೊಂಡು ಬಿಲ್ ಕೊಡಲು ಹೋದಾಗ-ಕ್ಯಾಷ್ ಕೌಂಟರ್‌ನಲ್ಲಿದ್ದ ಹುಡುಗ ಛಕ್ಕನೆ ಒಮ್ಮೆ ಕಣ್ಣು ಹೊಡೆದ. ಆಗಲೂ ಒಂಥರಾ ಆಗಿಬಿಡ್ತು. ಇನ್ಮೇಲೆ ಹೀಗೆ ಮಾಡಲ್ಲ. ಐ ಯಾಮ್ ಸಾರಿ... ಅಂದಿದೀಯ.ಹೇಳು ಶ್ವೇತಾ, ನಿಂಗೆ ಇದೆಲ್ಲಾ ಬೇಕಿತ್ತಾ? ಇನ್ನು ವಿವರಿಸಲಾರೆ- ನಂಗೆ ವಿಪರೀತ ನೋವಾಗಿದೆ...-ನವೀನ್

No comments: